Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಂಗನಾಯಕ ನಿರ್ದೇಶಕ‌ನೊಬ್ಬನ ಜನ್ಮಾಂತರದ ಸಿನಿಮಾ ಕನಸಿನ ಕಥೆ..- ರೇಟಿಂಗ್ : 3/5
Posted date: 09 Sat, Mar 2024 02:43:26 PM
ಕನ್ನಡದಲ್ಲಿ ಮೊದಲ ವಾಕ್ಚಿತ್ರ ಮಾಡಬೇಕೆಂದು ಹೊರಟ ನಿರ್ದೇಶಕನೊಬ್ಬನ  ಜನ್ಮಾಂತರದ ಕಥೆಯೇ ರಂಗನಾಯಕ. ನಿರ್ದೇಶಕ ಗುರುಪ್ರಸಾದ್ ಅವರ ಈ ಕಥೆಯಲ್ಲಿ 1911 ರಲ್ಲೇ ಕನ್ನಡದ ಪ್ರಥಮ ವಾಕ್ಚಿತ್ರ ತೆರೆಕಾಣಬೇಕಿತ್ತು. ಆ ಚಿತ್ರ ಮಾಡಬೇಕೆಂಬ ಕನಸು ಹೊತ್ತ  ನಿರ್ದೇಶಕನ ಪ್ರಯತ್ನವನ್ನು ಪರಭಾಷಿಗರು  ಹೇಗೆಲ್ಲಾ ಹತ್ತಿಕ್ಕಿದರು ಎಂಬುದನ್ನು  ಈ ಕಥೆಯಲ್ಲಿ ಹೇಳಲಾಗಿದೆ. 
 
ರಂಗನಾಯಕ ಚಿತ್ರದ ಕಥೆಯಲ್ಲಿ  ಗುರುಪ್ರಸಾದ್ ಅವರೇ ಹೀರೋ. ಅವರ  ಕಥೆಯಲ್ಲಿ ಬರುವ ನಾಯಕನೇ ರಂಗನಾಯಕ(ಜಗ್ಗೇಶ್).  ಟಿವಿಯ ರಿಯಾಲಿಟಿ  ಕಾರ್ಯಕ್ರಮದಲ್ಲಿ  ಚಿತ್ರ ನಿರ್ದೇಶಕ ಗುರುಪ್ರಸಾದ್ ರನ್ನು ಅತಿಥಿಯಾಗಿ ಆಹ್ವಾನಿಸಲಾಗಿರುತ್ತದೆ,  ಭೂತಕನ್ನಡಿ ಹೆಸರಿನ ಸಮ್ಮೋಹಿನಿ ಕಾರ್ಯಕ್ರಮದಲ್ಲಿ  ಆ ನಿರ್ದೇಶಕ ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೆ ಎಂದು  ಹೇಳುತ್ತ ಹೋಗುತ್ತಾನೆ. 1911 ರ ಸಮಯದ ಆ ಕಥೆಯಲ್ಲಿ  ಪದ್ಮನಾಭ ಶರ್ಮ ಆಗಿದ್ದ ಗುರುಪ್ರಸಾದ್ ಭಾರತದ  ಮೊದಲ ವಾಕ್ಷಿತ್ರವನ್ನು  ಕನ್ನಡದಲ್ಲೇ  ನಿರ್ದೇಶನ ಮಾಡಬೇಕು ಎಂದು ಕನಸು ಕಂಡಿರುತ್ತಾನೆ, ಅದು ಕನ್ನಡಿಗರ, ಕನ್ನಡ ಸಿನಿಮಾವೇ ಆಗಿರಬೇಕು ಎನ್ನುವ ಮಹದಾಸೆ  ಹೊತ್ತಿರುತ್ತಾನೆ. 
 
ಪದ್ಮನಾಭ ಶರ್ಮಾ ನಿರ್ದೇಶನದ  ಆ ಚಿತ್ರದ ಹೆಸರೇ `ರಂಗನಾಯಕ`. ಹಾಗೆ ನೋಡಿದರೆ ೧೯೧೧ರಲ್ಲೇ  ಪದ್ಮನಾಭ ಶರ್ಮ ನಿರ್ದೇಶನದ ಕನ್ನಡ ವಾಕ್ಚಿತ್ರ `ರಂಗನಾಯಕ` ತೆರೆ ಕಾಣಬೇಕಿತ್ತು. ಆದರೆ ಪರಭಾಷಿಗರ ಕುತಂತ್ರದಿಂದಾಗಿ ಆ ಚಿತ್ರದ ಡಬ್ಬಿಗಳು ಮಣ್ಣಲ್ಲೇ ಹೂತು ಹೋಗಬೇಕಾಯಿತು. ಆನಂತರ  ಮತ್ತೊಂದು  ಕನ್ನಡ ಚಿತ್ರ ನಿರ್ಮಾಣವಾಗಿ ತೆರೆಕಾಣಲು 23 ವರ್ಷ ಕಾಯಬೇಕಾಯಿತು. ಅದೇ 1924ರಲ್ಲಿ ತೆರೆಕಂಡ ಸತಿ ಸುಲೋಚನಾ. ರಂಗನಾಯಕ ಚಿತ್ರವನ್ನು ತೆರೆಗೆ ತರಲೇಬೇಕೆಂಬ ದೊಡ್ಡ ಕನಸು ಕಂಡಿದ್ದ  ನಿರ್ದೇಶಕ  ಪದ್ಮನಾಭ ಶರ್ಮ  ಈ ಜನ್ಮದಲ್ಲಿ ಆ ಕನಸನ್ನು  ಹೇಗೆ ನನಸಾಸಿಕೊಂಡ ಎಂಬುದನ್ನು ಗುರುಪ್ರಸಾದ್ ಹೇಳಿದ್ದಾರೆ. ಆ ರಂಗನಾಯಕನ ಪಾತ್ರಧಾರಿಯೇ ನವರಸನಾಯಕ ಜಗ್ಗೇಶ್.  ಚಿತ್ರದ ಮೊದಲಾರ್ಧದಲ್ಲಿ  ಗುರುಪ್ರಸಾದ್ ಅವರೇ ಆವರಿಸಿಕೊಂಡಿದ್ದಾರೆ.  ನಾಯಕಿ ರಚಿತಾ ಮಹಾಲಕ್ಷ್ಮಿ  ಎರಡು ಹಾಡುಗಳಿಗಷ್ಟೇ ಸೀಮಿತವಾಗಿದ್ದು, ಮೊದಲಾರ್ಧದ ಕಥೆಯಲ್ಲಿ ಗುರುಪ್ರಸಾದ್ ಅವರ ಪಾತ್ರವೇ ಹೀರೋ. ಜಗ್ಗೇಶ್ ಅವರು ಒಂದೆರಡು ಸೀನ್ ಹಾಗೂ ಹಾಡಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಎರಡನೇ ಭಾಗದಲ್ಲಿ ನಿಜವಾದ ಸಿನಿಮಾ  ಆರಂಭವಾಗುತ್ತದೆ. ಸಿನಿಮಾದೊಳಗೆ ಸಿನಿಮಾ ತಂತ್ರವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ದ್ವಿತಿಯ ಭಾಗದಲ್ಲಿ  ಆ ಚಿತ್ರವನ್ನೇ ಹೆಚ್ಚು  ತೋರಿಸಲಾಗಿದೆ. ಸಹವಾಸ ದೋಷದಿಂದ ಹಾಳಾಗಿದ್ದ  ರಂಗನಾಯಕನನ್ನು ಪತ್ನಿ ವರಲಕ್ಷ್ಮಿ(ರಚಿತಾ ಮಹಾಲಕ್ಷ್ಮಿ) ಹೇಗೆ ಬದಲಾಯಿಸುತ್ತಾಳೆ ಎಂಬುದನ್ನು ಸೆಕೆಂಡ್ ಹಾಫ್ ನಲ್ಲಿ  ತೋರಿಸಲಾಗಿದೆ.  ಎದ್ದೇಳು  ಮಂಜುನಾಥ  ಚಿತ್ರದ ಟೈಟಲ್‌ ಸಾಂಗ್‌ನಲ್ಲಿ  ರಾಜನ ಪೋಷಾಕಿನಲ್ಲಿ  ದರ್ಶನ ಕೊಟ್ಟಿದ್ದ ಜಗ್ಗೇಶ್, ರಂಗನಾಯಕ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಇದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಇದೊಂದು ಹೊಸ ಪ್ರಯತ್ನ ಎನ್ನಬಹುದು. ಗುರುಪ್ರಸಾದ್  ತಮ್ಮ ಎಂದಿನ ಬರವಣಿಗೆಯಿಂದ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಗ್ಯಾರಂಟಿ, ಇಡಿ, ಸಿಡಿ ಹೀಗೆ  ಸಾಕಷ್ಟು ರಾಜಕೀಯ ವಿಡಂಬನೆಯನ್ನೂ ಚಿತ್ರಕಥೆಯಲ್ಲಿ  ತೆಗೆದುಕೊಂಡಿದ್ದಾರೆ,  ಇನ್ನು ಕನ್ನಡಭಾಷಾ ಪ್ರೇಮ ತುಂಬಿದ ಸಂಭಾಷಣೆಗಳು,  ಹಾಡುಗಳು ಇಷ್ಟವಾಗುತ್ತವೆ. ನವರಸ ನಾಯಕ ಜಗ್ಗೇಶ್ ಅವರ  ಅಭಿನಯವೇ  ಇಡೀ ಚಿತ್ರದ ಹೈಲೈಟ್. ಸಿಕ್ಕ ಅವಕಾಶದಲ್ಲಿ  ಅವರು ತಮ್ಮ ಅಭಿನಯ, ಹಾವಭಾವದಿಂದಲೇ ಪ್ರೇಕ್ಷಕರನ್ನು  ನಗಿಸಿದ್ದಾರೆ,  ಅಭಿಮಾನಿಗಳಿಗಂತೂ ಅವರ ಅಭಿನಯ ಬಹಳ ಇಷ್ಟವಾಗುತ್ತದೆ.
 
ಕನ್ನಡ  ನಟರನ್ನು ಮಿಮಿಕ್ರಿ ಮಾಡುವುದು ಹಾಗೂ ಹಿಂದಿನ ಜನಪ್ರಿಯ ಹಾಡುಗಳ ಸಾಹಿತ್ಯ ಬದಲಿಸಿ ಹಾಡುವ ಸನ್ನಿವೇಶಗಳಲ್ಲಿ  ಇಷ್ಟವಾಗುತ್ತಾರೆ. ಇನ್ನುಳಿದಂತೆ ರಿಯಾಲಿಟಿ ಕಾರ್ಯಕ್ರಮದ ಚರ್ಚೆಯಲ್ಲಿ ಕಾಣಿಸಿಕೊಳ್ಳುವ  ಯೋಗರಾಜ್ ಭಟ್ ತಮ್ಮ ಡೈಲಾಗ್‌ಗಳಿಂದಲೇ ಚಾಟಿ ಬೀಸಿದ್ದಾರೆ. ಫ್ಲ್ಯಾಷ್ ಬ್ಯಾಕ್ ಕಥೆಯಲ್ಲಿ ಚೈತ್ರಾ ಕೋಟೂರು  ನಾಯಕನ ತಾಯಿ ಮಹಾರಾಣಿಯ ಪಾತ್ರದಲ್ಲಿ  ರಂಜಿಸುತ್ತಾರೆ. ಉಳಿದಂತೆ  ಆ  ನಿರ್ದೇಶಕನನ್ನು  ಸಮ್ಮೊಹಿನಿಗೊಳಪಡಿಸಿ ಆತನಿಗೆ  ಪ್ರಶ್ನೆಗಳನ್ನು  ಕೇಳುವ ಎಂ.ಕೆ. ಮಠ  ಅವರ  ಪಾತ್ರವೂ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಂಗನಾಯಕ ನಿರ್ದೇಶಕ‌ನೊಬ್ಬನ ಜನ್ಮಾಂತರದ ಸಿನಿಮಾ ಕನಸಿನ ಕಥೆ..- ರೇಟಿಂಗ್ : 3/5 - Chitratara.com
Copyright 2009 chitratara.com Reproduction is forbidden unless authorized. All rights reserved.